Dark Light

Blog Post

Namma Bagalkot > News > Politics > National Reconstruction Work by ABVP: ಎಬಿವಿಪಿಯಿಂದ ರಾಷ್ಟ್ರ ಪುನರ್ ನಿರ್ಮಾಣ ಕಾರ್ಯ- ದತ್ತಾತ್ರೇಯ ಹೊಸಬಾಳೆ

National Reconstruction Work by ABVP: ಎಬಿವಿಪಿಯಿಂದ ರಾಷ್ಟ್ರ ಪುನರ್ ನಿರ್ಮಾಣ ಕಾರ್ಯ- ದತ್ತಾತ್ರೇಯ ಹೊಸಬಾಳೆ

National reconstruction work by ABVP- Dattatrey’s Hosabale
ಬಾಗಲಕೋಟೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಳವಳಿಗಳನ್ನು ರೂಪಿಸುವ ಕೆಲಸವನ್ನಷ್ಟೇ ಮಾಡದೆ ರಾಷ್ಟ್ರಪುನರ್ ನಿರ್ಮಾಣದ ಮಹತ್ವದ ಕಾರ್ಯವನ್ನೂ ಮಾಡುತ್ತ ಬಂದಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ಸೋಮವಾರ ನಗರದ ಬಸವೇಶ್ವರ ಇಂಜನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆರಗ ಎಸ್ ಎಸ್ ಜಿಲ್ಲಾಸಂಘಚಾಲಕ ಡಾ.ಸಿ.ಎಸ್. ಪಾಟೀಲ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಬಾಗಲಕೋಟೆಯೊಂದಿಗಿನ ತಮ್ಮ ನೆನಪುಗಳನ್ನು ಮೆಲಕು ಹಾಕಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಳುವಳಿಗಳನ್ನಷ್ಟೇ ರೂಪಿಸಿಲ್ಲ. ಸಂಘಟನೆಯಲ್ಲಿ ಕೆಲಸ ಮಾಡಿದವರು ಸಮಾಜ, ದೇಶ, ಧರ್ಮಕ್ಕಾಗಿ ಏನನ್ನಾದರೂ ಕೊಡುಗೆ ನೀಡಬೇಕೆಂಬ ಮಹತ್ತರ ಗುರಿಯಿಟ್ಟುಕೊಂಡು ಜೀವಿಸುತ್ತಿದ್ದಾರೆ. ಶಿಕ್ಷಣ, ಪತ್ರಿಕೋದ್ಯಮ, ಸಾಮಾಜಿಕ ಕಾರ್ಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದರು.
1980ರ ದಶಕದಲ್ಲಿ ಅನಂತಕುಮಾರ ಹಾಗೂ ನಾನು ಎಬಿವಿಪಿ ಕೆಲಸ ಮಾಡುವಾಗ ಪತ್ರಕರ್ತ ರಾಮ ಮನಗೂಳಿ ಸಿ.ಎಸ್.ಪಾಟೀಲ ಅವರನ್ನು ಎಬಿವಿಪಿ ನಗರ ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ಸೂಚಿಸಿದ್ದರು. ನಂತರ ಪಾಟೀಲರ ಮನೆಗೆ ನಾವು ತೆರಳಿದಾಗ ಅಧ್ಯಾಪಕನಿಗೆ ವಿದ್ಯಾರ್ಥಿ ಸಂಘಟನೆಯಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದರು.ಆಗ ನಾವು ಮನವರಿಕೆ ಮಾಡಿದಾಗ ಶಿಕ್ಷಕನಾದರೇನು ಜೀವನ ಪರ್ಯಂತ ವಿದ್ಯಾರ್ಥಿಯೇ ಎಂದು ಸೇರ್ಪಡೆಗೊಂಡರು. ವಿದ್ಯಾರ್ಥಿ ಎಂಬ ಭಾವದಲ್ಲೇ ಅವರು ಜೀವಿಸಿದ್ದರಿಂದ ಇಂದು ಸಾಧಕರಾಗಿದ್ದಾರೆ ಎಂದು ಹೇಳಿದರು.

ಸ್ಥಾನ, ಶಿಕ್ಷಣದ ಪದವಿ ಸಿಕ್ಕಾಗ ಅಹಂಕಾರವೂ ಬರುತ್ತದೆ. ಕರ್ಜೂರದ ಮರ ಎತ್ತರವಾಗಿ ಬೆಳೆಯುತ್ತಿದೆ ಯಾರಿಗೂ ನೆರಳಾಗುವುದಿಲ್ಲ ಹಣ್ಣು ಪಡೆಯಬೇಕೆಂದರೆ ಮರ ಅತೀ ಎತ್ತರದಲ್ಲಿ ಇರುತ್ತದೆ. ಆದರಿಂದ ಅದು ಯಾರಿಗೂ ಪ್ರಯೋಜನವಾಗುವುದಿಲ್ಲ. ಫಲ ಉಳ್ಳ ಮರ ಎಂದಿಗೂ ಬಾಗಿರಬೇಕು. ಆಗ ಮಾತ್ರ ಉಳಿದವರಿಗೆ ಪ್ರಯೋಜನವಾಗುತ್ತದೆ. ಹಾಗೆ ಸಿ.ಎಸ್.ಪಾಟೀಲ ಸೇರಿ ಸಾಧಕರು ಸಮಾಜಕ್ಕೆ ಉಪಕಾರಿಯಾಗಿದ್ದಾರೆ ಎಂದು ಬಣ್ಣಿಸಿದರು.
ಡಾ.ಸಿ.ಎಸ್.ಪಾಟೀಲ ಅವರು ಮಾತನಾಡಿ, ವಿದ್ಯಾರ್ಥಿ ಪರಿಷತ್ತಿನಿಂದ ಆರಂಭಗೊಂಡ ಬದುಕು ಇಂದು ಜಿಲ್ಲಾ ಸಂಘಚಾಲಕನಾಗುವವರೆಗೆ ಬೆಳೆದು ಬಂದಿದೆ. ದಿವಂಗತ ಅನಂತಕುಮಾರ, ಪಿ.ವಿ.ಕೃಷಗಭಟ್ಟರು, ದತ್ತಾತ್ರೇಯ ಹೊಸಬಾಳೆ ಅಂಥವರ ಮಹನೀಯರಿಂದ ಪ್ರಭಾವಿತನಾಗಿ ಕೆಲಸ ಮಾಡಿದ್ದೇನೆ. ಸಂಘದ ಕಾರ್ಯ ತೃಪ್ತಿ ನೀಡಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬವಿವ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಡಾ.ಸಿ.ಎಸ್.ಪಾಟೀಲ ಅವರು ಸಂಘದ ವಿಜಯಮಹಾಂತೇಶ ಶಾಲೆಯ ವಿದ್ಯಾರ್ಥಿ. ಬಸಪ್ಪಣ್ಣ ಪಲ್ಲೇದರಂಥ ಮಹನೀಯರಿಂದ ಸಂಘ ಬೆಳೆಯಿತು. ಸಿ.ಎಸ್.ಪಾಟೀಲ ಅವರು ಇಲ್ಲಿಯ ವಿದ್ಯಾರ್ಥಿ ಆಗಿ, ಅಧ್ಯಾಪಕರಾಗಿ ನಂತರ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದರು. ತಮ್ಮ ಬುದದ್ಧಿವಂತಿಕೆ ಮೇಲೆ ಬೆಳೆದು ಬಂದರು ಎಂದು ಹೇಳಿದರು.
ನಿವೃತ್ತರಾದವರನ್ನು ಮರಳಿ ತಂದು ಸಂಘದ ಕಾರ್ಯಗಳಲ್ಲಿ ತೊಡಗಿಸುತ್ತೇವೆ. ಅವರ ಸಮರ್ಥ ಸೇವೆ ಪಡೆಯುತ್ತ ಬವಿವ ಸಂಘ ಬಂದಿದೆ ಅದರಲ್ಲಿ ಸಿ.ಎಸ್.ಪಾಟೀಲರೂ ಒಬ್ಬರು ಎಂದು ಹೇಳಿದರು.
ಚರಂತಿಮಠದ ಶ್ರೀಪ್ರಭುಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ವಿದ್ಯಾರ್ಥಿ ಪರಿಷತ್ತಿನ ಮಾಜಿ ಸದಸ್ಯ ಪಿ.ವಿ.ಕೃಷ್ಣಭಟ್, ನೃಪತುಂಗ ವಿವಿ ಕುಲಪತಿ ಶ್ರೀನಿವಾಸ ಬಳ್ಳಿ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಿ.ಎನ್.ಪಾಟೀಲ, ಅಭಿನಂದನಾ ಗ್ರಂಥದ ಸಂಪಾದಕ ಎಸ್.ಜಿ.ಕೋಟಿ, ಸ್ವಾಗತ ಸಮಿತಿ ಕಾರ್ಯದರ್ಶಿ ಜಿ.ಕೆ.ತಳವಾರ ವೇದಿಕೆಯಲ್ಲಿದ್ದರು.
ಸಂಘದ ಹಿರಿಯ ಪ್ರಚಾರಕರಾದ ವಿ.ನಾಗರಾಜ, ಸುಧೀರ, ಉತ್ತರ ಪ್ರಾಂತ ಪ್ರಚಾರಕ ನರೇಂದ್ರ, ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ವಿಪ ಮಾಜಿ ಸದಸ್ಯರಾದ ನಾರಾಯಣಸಾ ಭಾಂಡಗೆ, ಅರುಣ ಶಹಾಪುರ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *