Dark Light

Blog Post

Namma Bagalkot > News > Art & Entertainment > Kite Festival in Bagalkot: ನೀಲಿ ಬಾನಲ್ಲಿ ಚಿತ್ತಾರ ಬಿಡಿಸಿದ ಪತಂಗ…!

Kite Festival in Bagalkot: ನೀಲಿ ಬಾನಲ್ಲಿ ಚಿತ್ತಾರ ಬಿಡಿಸಿದ ಪತಂಗ…!

Kite Festival Enthralls Enthusiasts in Bagalkot
ಬಾಗಲಕೋಟೆ: ಮುಗಿಲೆತ್ತರಕ್ಕೆ ಏರಿ ಭೂಮಿಯತ್ತ ಗಿರ,ಗಿರನೇ ಸಾಗುತ್ತ ಬಂದು ಜನರನ್ನು ರೋಮಾಂಚನಗೊಳಿಸುತ್ತಿದ್ದ ಪತಂಗಗಳು. ಆಕಾಶದಲ್ಲಿ ಬಣ್ಣ, ಬಣ್ಣದ ಚಿತ್ತಾರ ಬಿಡಿಸಿದ ಗಾಳಿಪಟಗಳು. ಚಿಕ್ಕದಾದ ಸೂತ್ರದಲ್ಲಿ ಬೃಹದಾಕಾರದ ಆಕ್ಟೊಪಸ್, ಡ್ರ್ಯಾಗನ್ … ಬಾನಿನಲ್ಲಿ ಜನರಿಗೆ ದರ್ಶನ ನೀಡಿದ ಪವರ್ ಸ್ಟಾರ್ ಪುನಿತ್‌ರಾಜಕುಮಾರ್, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮಿಗಳು..!


ಕೋಟೆನಾಡಿನ ಬಳಗ ನವನಗರದ ಜಿಲ್ಲಾ ಕ್ರೀಂಡಾಗಣದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಗಾಳಿಪಟ ಉತ್ಸವದ ಝಲಕ್‌ಗಳಿವು. ಎರಡು ದಿನಗಳ ಉತ್ಸವಕ್ಕೆ ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಎಚ್.ವೈ.ಮೇಟಿ, ವಿಪ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಜಿಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ರಾಜು ನಾಯ್ಕರ, ನಾಗರಾಜ ಹದ್ಲಿ, ರಕ್ಷಿತಾ ಈಟಿ ಸೇರಿ ಗಣ್ಯರು ಚಾಲನೆ ನೀಡಿದರು.


ಬೆಳಗಾವಿ, ಗುಜರಾತ್‌ನ ಸೂರತ್, ಮಹಾರಾಷ್ಟ, ದೊಡ್ಡಬಳ್ಳಾಪುರ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ಸ್ಪರ್ಧಿಗಳು ಪಾಲ್ಗೊಂಡು ತಮ್ಮ ಕೌಶಲವನ್ನು ಪ್ರದರ್ಶಿಸಿದರು. ಹುಲಿ, ಆನೆ ಮುಖ, ರಿಂಗ್ ಕೈಟ್ ಸೇರಿದಂತೆ ಹತ್ತಾರು ಜನರು ಹೊರುವಷ್ಟು ಬೃಹದಾದ ಪತಂಗಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಸಂಜೆ ಸೋರ್ಯ ಹಸ್ತವಾಗುತ್ತಿದ್ದಂತೆ ಎಲ್‌ಇಡಿ ಸಹಿತ ಪತಂಗಗಳು ಆಕಾರದಲ್ಲಿ ಚಿತ್ತಾರ ಮೂಡಿಸಿದಾಗ ನೋಡುಗರ ಮೊಗದಲ್ಲಿ ಮಂದಹಾಸ ಮೂಡಿತು.
ಜಿಲ್ಲಾ ಕ್ರೀಡಾಂಗಣದಲ್ಲಿ ಹಸಿರು ಹೊದಿಕೆ ಹಾಯಿಸಿ ಗಾಳಿಪಟ ಹಾರಿಸುವುದಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸಾರ್ವಜನಿಕರು ವೀಕ್ಷಿಸಲು ಗ್ಯಾಲರಿ, ಸಂಜೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಬಾಲ್ಯದ ನೆನಪು ತಂದ ಉತ್ಸವ:
ಮಾಜಿ ಸಚಿವ ಎಸ್.ಆರ್.ಪಾಟೀಲ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಗಾಳಿಪಟ ಬಾಲ್ಯದ ನೆನಪುಗಳನ್ನು ಹೊತ್ತು ತಂದಿದೆ. ಜೀವನದ ಸೂತ್ರವನ್ನು ಗಾಳಿಪಟ ಸಾರುತ್ತದೆ. ಎಷ್ಟೇ ಎತ್ತರಕ್ಕೆ ಏರಿದರೂ ಬಂದ ಮೂಲವನ್ನು ಮರೆಯಬಾರದು ಎಂಬ ಚೆಂದದ ಜೀವನ ಸೂತ್ರ ಅದರಲ್ಲಿ ಅಡಗಿದೆ ಎಂದರು.


ಮಾಜಿ ಸಚಿವ ಎಚ್.ವೈ.ಮೇಟಿ ಅವರು ಮಾತನಾಡಿ, ನಮ್ಮ ಬಾಲ್ಯದಲ್ಲಿ ಇಷ್ಟು ದೊಡ್ಡದಾದ ಪತಂಗ ನೋಡಿರಲಿಲ್ಲ. ಆದರೆ ದಾರ, ಪತಂಗ ಹಿಡಿದುಕೊಂಡು ಎಲ್ಲವನ್ನೂ ನಾವೇ ಸಿದ್ಧಪಡಿಸಿ ಸಂಭ್ರಮಿಸಿದ ನೆನಪುಗಳು ಇಂದಿಗೂ ಹಚ್ಚ ಹಸಿರಾಗಿ ಮನದಲ್ಲಿ ಉಳಿದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರು ಮಾತನಾಡಿ, ಗಾಳಿಪಟ ಉತ್ಸವ ದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇಂಥ ಕಾರ್ಯಕ್ರಮಗಳಿಗೆ ನೆರವಾಗುವ ಕೆಲಸವನ್ನು ಮಾಡಬೇಕೆಂದು ಹೇಳಿದರು.
ಮಂಜುನಾಥ ಗೋಡೆಪ್ಪನವರ, ಮಲ್ಲಪ್ಪ ಅಂಗಡಿ, ದೀಪಕ ಬಾಹತಿ, ಅನಿಲಕುಮಾರ ಹಿರೇಮಠ, ಪವನಕುಮಾರ ಕಸುಂದೆ, ರಂಗನಾಥ ಗೌಡರ, ರವಿಕಿರಣ ಬದಾಮಿ, ಚಂದ್ರು ಅಂಬಿಗೇರ, ಕಿರಣಕುಮಾರನಾರಾಯಣಿ, ರಾಜೇಶ ಉಡುಪಿ, ರಘುಕಿರಣ ಬದಾಮಿ, ಶ್ರವಣಕುಮಾರ್ ಮೂಗಿನ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ.

Leave a comment

Your email address will not be published. Required fields are marked *