Dark Light

Blog Post

Namma Bagalkot > News > Bagalkot > District Folklore Convention: ವೆಂಕಪ್ಪ ಸುಗತೇಕರ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ

District Folklore Convention: ವೆಂಕಪ್ಪ ಸುಗತೇಕರ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ

Venkappa Sugathekara Elected President of Bagalkot District Folklore Convention

ಬಾಗಲಕೋಟ: ಜಿಲ್ಲಾ ಕನ್ನಡ ಜಾನಪದ ಪರಿಷತ್‌ನಿಂದ ಬಾಗಲಕೋಟ ತಾಲೂಕಿನ ಶಿರೂರ ಪಟ್ಟಣದಲ್ಲಿ ಫೆ.5 ರಂದು ಜರುಗಲಿರುವ ಜಿಲ್ಲಾ ಮಟ್ಟದ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಿ. ಎಂ. ಸಾವಕಾರ ತಿಳಿಸಿದ್ದಾರೆ.

ಪರಿಚಯ: ಗೊಂದಳಿ ಕಲೆಯನ್ನು ಚಿಕ್ಕಂದಿನಿಂದಲೇ ಪಸರಿಸುತ್ತಾ ಬಂದಿರುವರು. ಸಾವಿರಕ್ಕೂ ಹೆಚ್ಚು ಗೊಂದಳಿ ಹಾಡುಗಳನ್ನು ಹಾಡಿರುವರು. ನೂರಕ್ಕು ಹೆಚ್ಚು ಕಥೆಗಳನ್ನು ಹೇಳಿರುವರು. ತಲೆತಲಾಂತರದಿಂದ ಗೊಂದಳಿ ಕಲೆ ಬಳುವಳಿಯಾಗಿ ಬಂದಿದ್ದು. ಮನೆ ಮನೆಗೆ ಹೋಗಿ ಹಾಡನ್ನು ಹಾಡಿ ಜನರ ಮೆಚ್ಚುಗೆ ಪಡೆದಿರುವರು. ಹಲವಾರು ರಾಜ್ಯಗಳಲ್ಲಿ ಗೊಂದಳಿ ಕಾರ್ಯಕ್ರಮಗಳನ್ನು ನೀಡಿದ್ದು, ಕಳೆದ 67 ವರ್ಷಗಳಿಂದ ಕಲೆಯನ್ನು ಪ್ರಚುರ ಪಡಿಸುತ್ತಾ ಬಂದಿರುವರು.

ಪುರಂದರ ದಾಸರು, ಶಿಶುನಾಳ ಶರೀಫರು, ಕನಕದಾಸರು, ಮಡಿವಾಳ ರಾಚಯ್ಯನವರ ಮತ್ತು ಅಂಬಾ ಭವಾನಿ, ಯಲ್ಲಮ್ಮನ ಪದಗಳನ್ನು ಹಾಗೂ ತತ್ವ ಪದಗಳನ್ನು ಹಾಡುವರು. ರಾಜರ ಮತ್ತು ದೇವಿಯರ ಕಥೆಗಳನ್ನು ಹೇಳುವಲ್ಲಿ ಸಿದ್ಧಹಸ್ತರು. ಆಕಾಶವಾಣಿ, ದೂರದರ್ಶನ, ಅಂತರಾಷ್ಟ್ರೀಯ ಸಂಗೀತ ಸಮ್ಮೇಳನ, ರಾಷ್ಟ್ರೀಯ ಯುವಜನೋತ್ಸವ, ರಾಷ್ಟ್ರೀಯ ನಾಟಕೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಕಲಾ ಪ್ರದರ್ಶನ ಮಾಡಿರುವರು.

ಜಾನಪದ ಶ್ರೀ, ಕರ್ನಾಟಕ ರಾಜ್ಯೋತ್ಸವ, ಜಾನಪದ ಅಕಾಡೆಮಿ, ಜಾನಪದ ಲೋಕ, ಹಿರಿಯ ನಾಗರಿಕ, ರಾಜ್ಯ ಟಿಪ್ಪು ಸುಲ್ತಾನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಭಾಜನರಾಗಿರುವರು. ಇತ್ತೀಚಿಗೆ ಶ್ರೀಯುತರ ಅನುಪಮ ಜಾನಪದ ಕಲಾಸೇವೆಯನ್ನು ಪರಿಗಣಿಸಿ ಜಾನಪದ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ ಪದವಿ ನೀಡಿ ಗೌರವಿಸಿದೆ.

ಜಿಲ್ಲಾ ಮಟ್ಟದ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಜಾನಪದ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ ಅವರ ಮನೆಗೆ ತೆರಳಿ ಮಂಗಳವಾರ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಿ. ಎಂ. ಸಾವಕಾರ, ಕಸಾಪ ರಾಜ್ಯ ಕಾರ್ಯಕಾರಿನಿ ಸದಸ್ಯ ಜಿ. ಕೆ. ತಳವಾರ, ಕಜಾಪ ಕಾರ್ಯದರ್ಶಿ ಡಾ. ಎಸ್. ಎಸ್. ಭೂಮಣ್ಣವರ, ಜಂಟಿ ಕಾರ್ಯದರ್ಶಿ ವಿ. ಜಿ. ಪಾಟೀಲ, ಸಂಘಟನಾ ಕಾರ್ಯದರ್ಶಿ ಎಸ್. ಬಿ. ಕೋರಿ, ಸಂಚಾಲಕ ನಿಂಗರಾಜ ಮಬ್ರುಮಕರ, ಬಾಗಲಕೋಟ ತಾಲೂಕು ಕಜಾಪ ಅಧ್ಯಕ್ಷ ಎಸ್. ಬಿ. ಕಟಗಿ ಇದ್ದರು.

Leave a comment

Your email address will not be published. Required fields are marked *