Dark Light

Blog Post

Namma Bagalkot > News > bollywood > ಮತ್ತೊಂದು ಬಿಗ್ ಬಜೆಟ್ ಬಾಲಿವುಡ್‌ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್!
Rashmika Mandanna

ಮತ್ತೊಂದು ಬಿಗ್ ಬಜೆಟ್ ಬಾಲಿವುಡ್‌ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್!

ನಟಿ ರಶ್ಮಿಕಾ ಮಂದಣ್ಣ ಸದ್ಯ ಸಿನಿಮಾರಂಗದಲ್ಲಿ ಎಷ್ಟು ಬ್ಯುಸಿ ಆಗಿದ್ದಾರೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ತೆಲುಗು, ಹಿಂದಿ, ತಮಿಳು ಭಾಷೆಯ ಸಿನಿಮಾಗಳಲ್ಲಿ ಈಗ ರಶ್ಮಿಕಾ ಅವರದ್ದೇ ಹವಾ ಎಂಬಂತೆ ಆಗಿದೆ. ಈಚೆಗಷ್ಟೇ ಅವರು ಅತಿಥಿ ಪಾತ್ರ ಮಾಡಿದ್ದ ‘ಸೀತಾ ರಾಮಂ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿದೆ. ಅಕ್ಟೋಬರ್ ಮೊದಲ ಅವರ ನಟನೆಯ ಮೊದಲ ಹಿಂದಿ ಸಿನಿಮಾ ‘ಗುಡ್‌ಬೈ’ ತೆರೆಗೆ ಬರಲಿದೆ. ಈ ಮಧ್ಯೆ ರಶ್ಮಿಕಾ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಯಾವುದು ಆ ಸಿನಿಮಾ? ‘ಆಶಿಖಿ 3’.
ಕಾರ್ತಿಕ್ ಆರ್ಯನ್ ಹೀರೋ
ಬಾಲಿವುಡ್‌ನ ಸಕ್ಸಸ್‌ಫುಲ್ ಸೀಕ್ವೆಲ್‌ಗಳಲ್ಲಿ ಮ್ಯೂಸಿಕಲ್ ಲವ್ ಸ್ಟೋರಿ ‘ಆಶಿಖಿ’ ಕೂಡ ಒಂದು. 1990ರಲ್ಲಿ ‘ಆಶಿಖಿ’ ಸಿನಿಮಾ ತೆರೆಕಂಡಿತ್ತು. ಆ ನಂತರ 2013ರಲ್ಲಿ ‘ಆಶಿಖಿ 2’ ತೆರೆಗೆ ಬಂತು. ಇದೀಗ ‘ಆಶಿಖಿ 3’ ಸಿನಿಮಾ ಘೋಷಣೆ ಆಗಿದೆ. ಮೊದಲ ಭಾಗದಲ್ಲಿ ರಾಹುಲ್ ರಾಯ್ ಮತ್ತು ಅನು ಅಗರ್ವಾಲ್ ನಟಿಸಿದ್ದರು. ‘ಆಶಿಖಿ 2’ ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಶ್ರದ್ಧಾ ಕಪೂರ್ ನಟಿಸಿದ್ದರು. ಇದೀಗ ‘ಆಶಿಖಿ 3’ ಸಿನಿಮಾಗೆ ಕಾರ್ತಿಕ್ ಆರ್ಯನ್ ಹೀರೋ ಆಗಿ ಸೆಲೆಕ್ಟ್ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಧಿಕೃತ ಘೋಷಣೆ ಹೊರಬಿದ್ದಿದೆ. ಆದರೆ ನಾಯಕಿ ಯಾರು ಎಂಬುದು ಮಾತ್ರ ಗೊತ್ತಿರಲಿಲ್ಲ.
‘ಆಶಿಖಿ 3’ ಚಿತ್ರಕ್ಕೆ ರಶ್ಮಿಕಾ ನಾಯಕಿ
ಕಾರ್ತಿಕ್ ಆರ್ಯನ್ ನಟಿಸುತ್ತಿರುವ ‘ಆಶಿಖಿ 3’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ. ಈಚೆಗ ಜಾಹೀರಾತೊಂದಕ್ಕೆ ರಶ್ಮಿಕಾ ಮತ್ತು ಕಾರ್ತಿಕ್ ಆರ್ಯನ್ ಒಟ್ಟಿಗೆ ಪೋಸ್ ನೀಡಿದ್ದಾರೆ. ಇದೇ ಜೋಡಿಯನ್ನು ‘ಆಶಿಖಿ 3’ ಚಿತ್ರದಲ್ಲೂ ನೋಡುವುದಕ್ಕೆ ಫ್ಯಾನ್ಸ್ ಕಾದಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇದು ನಾಲ್ಕನೇ ಸಿನಿಮಾ
ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ನೀಡಿದ್ದು ‘ಮಿಷನ್‌ ಮಜ್ನು’ ಸಿನಿಮಾ ಮೂಲಕ. ಆ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಗೆ ಅವರು ನಾಯಕಿಯಾಗಿದ್ದಾರೆ. ಆ ಸಿನಿಮಾ ತೆರೆಕಾಣುವ ಮೊದಲೇ ಅಮಿತಾಭ್ ಬಚ್ಚನ್ ನಟನೆಯ ‘ಗುಡ್‌ಬೈ’ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಇದೀಗ ‘ಮಿಷನ್‌ ಮಜ್ನು’ ಸಿನಿಮಾಕ್ಕೂ ಮೊದಲೇ ‘ಗುಡ್‌ಬೈ’ ತೆರೆಗೆ ಬರಲಿದೆ. ಇನ್ನು, ರಣ್‌ಬೀರ್ ಕಪೂರ್ ನಾಯಕತ್ವದ ‘ಅನಿಮಲ್’ನಲ್ಲೂ ರಶ್ಮಿಕಾ ಅವರೇ ನಾಯಕಿ. ಹೀಗೆ ಒಂದೇ ಒಂದು ಹಿಂದಿ ಸಿನಿಮಾ ತೆರೆಕಂಡಿಲ್ಲವಾದರೂ, ಆಗಲೇ ಮೂರ್ನಾಲ್ಕು ಹಿಂದಿ ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡು ದಾಖಲೆ ಬರೆದಿದ್ದಾರೆ ನಟಿ ರಶ್ಮಿಕಾ.
ಜನವರಿಗೆ ‘ವಾರಿಸು’ ರಿಲೀಸ್
ಸದ್ಯ ‘ಗುಡ್‌ಬೈ’ ಸಿನಿಮಾದ ರಿಲೀಸ್ ಎದುರು ನೋಡುತ್ತಿರುವ ರಶ್ಮಿಕಾ, ದಳಪತಿ ವಿಜಯ್ ಜೊತೆಗಿನ ‘ವಾರಿಸು’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವು ಜನವರಿಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Leave a comment

Your email address will not be published. Required fields are marked *