Dark Light

Blog Post

Namma Bagalkot > News > bollywood > ಆಫ್ರಿಕಾ ನಾಡಲ್ಲಿ ಕನ್ನಡ ಕಲರವ: ವಿಜೃಂಭಣೆಯಿಂದ ನೆರವೇರಿದ 6ನೇ ನಾವಿಕೋತ್ಸವ
Navikotsava

ಆಫ್ರಿಕಾ ನಾಡಲ್ಲಿ ಕನ್ನಡ ಕಲರವ: ವಿಜೃಂಭಣೆಯಿಂದ ನೆರವೇರಿದ 6ನೇ ನಾವಿಕೋತ್ಸವ

ಬಹು ನಿರೀಕ್ಷಿತ 6ನೇ ನಾವಿಕೋತ್ಸವ ಸಮಾರಂಭ, ಕೀನ್ಯಾದ ನೈರೋಬಿ ನಗರದಲ್ಲಿ ಅದ್ಧೂರಿಯಾಗಿ ನೆರವೇರಿತು. ಇದೇ ಸೆಪ್ಟೆಂಬರ್‌ 9 ಮತ್ತು 10 ರಂದು ಎರಡು ದಿನಗಳ ಕಾಲ ನಡೆದ ಈ ಭವ್ಯ ಕನ್ನಡ ಸಮಾರಂಭಕ್ಕೆ ನಾವಿಕ ಸಂಸ್ಥೆಯ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರಾದ ಡಾ. ಕೃಷ್ಣಮೂರ್ತಿ ಜೋಯಿಸ್‌ ಅವರು ವಿಘ್ನ ನಿವಾರಕ ಗಣೇಶನಿಗೆ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದ ದೃಶ್ಯಾವಳಿಯನ್ನು ತೆರೆಯ ಮೇಲೆ ಪ್ರಸಾರ ಮಾಡುವ ಮೂಲಕ ಸಕಲ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಕೀನ್ಯಾ ಕನ್ನಡ ಸಾಂಸ್ಕೃತಿಕ ಸಂಘದ ಅಧ್ಯಕ್ಷರು ಹಾಗೂ ನಾವಿಕೋತ್ಸವದ ಮುಖ್ಯ ಸಂಚಾಲಕರಾದ ರವಿ ಕಿರಣ್‌ ಬೆಳವಾಡಿ ಹಾಗೂ ನಾವಿಕ ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾದ ಮಂಜುನಾಥ ರಾವ್‌ ಎಲ್ಲರನ್ನೂ ಸ್ವಾಗತಿಸಿ ಮನರಂಜನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೀನ್ಯಾದ ಭಾರತೀಯ ರಾಯಭಾರಿ ಕಚೇರಿಯ ಹಂಗಾಮಿ ಹೈ ಕಮಿಷನರ್‌ ರೋಹಿತ್‌ ವಧ್ವನ ಮಾತನಾಡಿ, ನಾವಿಕ ಮತ್ತು ಕೀನ್ಯಾ ಕನ್ನಡ ಸಂಘಟನೆಗಳು ಒಟ್ಟಾಗಿ ಆಯೋಜಿಸಿರುವ ನಾವಿಕೋತ್ಸವದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮೊದಲ ದಿನ ಸಂಜೆ ಅತ್ಯದ್ಭುತ ಮನರಂಜನಾ ಕಾರ್ಯಕ್ರಮ ನಡೆಯಿತು. ಖ್ಯಾತ ಸಂಗೀತ ನಿರ್ದೇಶಕ ಮನೋ ಮೂರ್ತಿ ಮತ್ತವರ ತಂಡದಿಂದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಿತು. ಸುಪ್ರಸಿದ್ಧ ಗಾಯಕರಾದ ಹೇಮಂತ್‌, ಚಿನ್ಮಯಿ, ಚೇತನ್‌, ಅನುರಾಧ ಭಟ್‌, ಮಾನಸ ಹೊಳ್ಳ, ವಾಣಿ ಸತೀಶ ಇನ್ನಿತರರು ಕನ್ನಡದ ಜನಪ್ರಿಯ ಹಾಡುಗಳನ್ನು ಹಾಡಿ ನೆರೆದವರನ್ನು ರಂಜಿಸಿದರು. ಕೆಲವು ಹಾಡುಗಳಿಗೆ ಜನ ಕುಣಿದು ಕುಪ್ಪಳಿಸಿದರು. ಸುಮಾರು 400ಕ್ಕೂ ಹೆಚ್ಚು ಜನ ಸಭಿಕರು ಸೇರಿದ್ದ ಈ ಕಾರ್ಯಕ್ರಮದಲ್ಲಿ ಅನಿವಾಸಿ ಕನ್ನಡಿಗರಲ್ಲದೆ ಅನಿವಾಸಿ ತಮಿಳು ಹಾಗೂ ತೆಲುಗು ಭಾಷಿಗರೂ ಆಗಮಿಸಿದ್ದು ಮತ್ತೊಂದು ವಿಶೇಷ.

ಎರಡನೇ ದಿನ ಮುಂಜಾನೆ ಕನ್ನಡಿಗರೆಲ್ಲರೂ ಸೇರಿ ಜೈನ್‌ ಭವನದ ಆವರಣದಲ್ಲಿ ಮೆರವಣಿಗೆ ನಡೆಸಿದರು. ಭಾಗವಹಿಸಿದವರಲ್ಲಿ ಅನೇಕರು ಮೈಸೂರು ಪೇಟ ತೊಟ್ಟು ರೇಷ್ಮೆ ಪಂಚೆಗಳನ್ನುಟ್ಟು ಕರ್ನಾಟಕದ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಿಂಚಿದರು. ಇತ್ತ ಮಹಿಳಾ ಮಣಿಯರು ವಿವಿಧ ಬಣ್ಣಗಳ ರೇಷ್ಮೆ ಸೀರೆಗಳನ್ನುಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಮತ್ತಷ್ಟು ಮೆರಗು ನೀಡಿತ್ತು. ಮೆರವಣಿಗೆಯ ನಂತರ ವಿವಿಧ ಫೋರಂಗಳಲ್ಲಿ ನಾನಾ ವಿಷಯಗಳ ಬಗ್ಗೆ ಪರಿಣಿತರೊಂದಿಗೆ ಪ್ರತ್ಯೇಕ ಚರ್ಚೆಗಳು ನಡೆದವು. ಬೆಂಗಳೂರಿನಿಂದ ಬಂದಿದ್ದ ಸಿಹಿ ಕಹಿ ಚಂದ್ರು ಮತ್ತವರ ತಂಡದಿಂದ ತಯಾರಾದ ಮಧ್ಯಾಹ್ನದ ಭೂರಿ ಭೋಜನ ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವಂತಿತ್ತು. ಕಾರ್ಯಕ್ರಮಕ್ಕೆ ಬಂದವರೆಲ್ಲ ಊಟದ ಸವಿಗೆ ನಾಲಗೆ ಚಪ್ಪರಿಸಿದ್ದೇ ಚಪ್ಪರಿಸಿದ್ದು.

ಸಂಜೆ ನಾಟಕ ರತ್ನ ದಿವಂಗತ ಹಿರಣ್ಣಯ್ಯ ವಿರಚಿತ ʻಪಶ್ಚಾತ್ತಾಪʼ ನಾಟಕವನ್ನು ನಾವಿಕ ರುವಾರಿ ವಲ್ಲೀಶ ಶಾಸ್ತ್ರಿ ಮತ್ತವರ ತಂಡ ಪ್ರಸ್ತುತ ಪಡಿಸಿ ನೆರೆದವರನ್ನು ರಂಜಿಸಿದರು. ಇದರೊಂದಿಗೆ ಕುದ್ರೋಳಿ ಗಣೇಶ ಅವರಿಂದ ಮ್ಯಾಜಿಕ್‌ ಶೋ, ನಡೆದಾಡುವ ವೈಲಿನ್‌ ವಾದಕ ಎಂದೇ ಖ್ಯಾತರಾಗಿರುವ ಅನೀಶ್‌ ವಿದ್ಯಾಶಂಕರ್‌ ಅವರಿಂದ ವೈಲಿನ ವಾದನ ಕಾರ್ಯಕ್ರಮ ನಡೆಯಿತು.

ಅಮೆರಿಕದ ನಾವಿಕ (ನಾವು ವಿಶ್ವ ಕನ್ನಡಿಗರು) ಸಂಸ್ಥೆ ಮತ್ತು ಕೀನ್ಯಾ ದೇಶದ ನೈರೋಬಿಯಲ್ಲಿರುವ ಕನ್ನಡ ಸಾಂಸ್ಕೃತಿಕ ಸಂಘ ಜೊತೆಗೂಡಿ ಈ 6ನೇ ನಾವಿಕೋತ್ಸವವನ್ನು ಆಯೋಜಿಸಿತ್ತು. ಈ ಎರಡು ದಿನಗಳ ನಾವಿಕೋತ್ಸವದ ಮಾತ್ರವಲ್ಲದೇ ಹೊರ ದೇಶಗಳಿಂದ ಬರುವ ಅನಿವಾಸಿ ಕನ್ನಡಿಗರಿಗಾಗಿ ಸ್ಥಳೀಯ ಸಫಾರಿಯಲ್ಲಿ ಸುತ್ತಾಡಲು ಟೂರ್ ಸಹ ಆಯೋಜಿಸಲಾಗಿತ್ತು. ವಾರದ ಮುಂಚೆಯೇ ಇಲ್ಲಿಗೆ ಬಂದಿಳಿದ ಅತಿಥಿಗಳೆಲ್ಲರೂ ಮಸೈಮರಾ, ಒಲ್ಪಜೇಟ, ನೈವಾಷ ಕಾಡುಗಳನ್ನು ಸುತ್ತಿ ವಿಶ್ವ ಪ್ರಸಿದ್ಧ ತಾಣಗಳಿಗೆ ಭೇಟಿ ನೀಡಿ ನಂತರ ನಾವಿಕೋತ್ಸವದಲ್ಲಿ ಭಾಗವಹಿಸಿದ್ದರು.

Leave a comment

Your email address will not be published. Required fields are marked *