Dark Light

Blog Post

Namma Bagalkot > News > Uncategorized > MLA Charanthimath Hails HU: ಬಾಗಲಕೋಟೆ ತೋವಿವಿ ದೇಶಕ್ಕೆ ಮಾದರಿ : ಶಾಸಕ ಚರಂತಿಮಠ

MLA Charanthimath Hails HU: ಬಾಗಲಕೋಟೆ ತೋವಿವಿ ದೇಶಕ್ಕೆ ಮಾದರಿ : ಶಾಸಕ ಚರಂತಿಮಠ

MLA Dr Charanthimath Hailed Horticulture University as a Model University

 

ಬಾಗಲಕೋಟೆ: ದೇಶದಲ್ಲಿಯೇ ತೋಟಗಾರಿಕೆ ಬೆಳೆಗಳಲ್ಲಿ 2ನೇ ಸ್ಥಾನ, ಹೂ ಬೆಳೆಗಳಲ್ಲಿ 2ನೇ ಸ್ಥಾನ, ಹಣ್ಣು ಬೆಳೆಗಳಲ್ಲಿ 6ನೇ ಸ್ಥಾನ, ಸಾಂಬಾರ ಪದಾರ್ಥದಲ್ಲಿ 6ನೇ ಸ್ಥಾನ ಹಾಗೂ ತರಕಾರಿ ಬೆಳೆಯಲ್ಲಿ 8ನೇ ಸ್ಥಾನ ಪಡೆಯುವ ಮೂಲಕ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ತೋವಿವಿಯ ಉದ್ಯಾನಗಿರಿಯಲ್ಲಿ ಜರುಗಿದ ತೋಟಗಾರಿಕೆ ಮೇಳದ 2ನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಗಲಕೋಟೆ ಜಿಲ್ಲೆಯ ನೆಲ, ಜಲ ಮಣ್ಣಿನ ಮಾದರಿಯನ್ನು ಪರಿಶಿಲಿಸಿಕೊಂಡು 2008ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಅಧಿವೇಶನದಲ್ಲಿ ಘೋಷಣೆ ಮಾಡಿದರ ಫಲವಾಗಿ ತೋಟಗಾರಿಕೆ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ ಎಂದರು.
ರಾಜ್ಯದಲ್ಲಿ ತೋಟಗಾರಿಕೆ ವಿಸ್ತೀರ್ಣ 23.25 ಲಕ್ಷ ಹೆಕ್ಟೆರ್ ಪ್ರದೇಶ ಹೊಂದಿದ್ದು, 183.46 ಲಕ್ಷ ಟನ್ ಉತ್ಪಾದನೆ ಹೊಂದಿದೆ. ತೋಟಗಾರಿಕೆಯ ಕೃಷಿ ಜಿಡಿಪಿ ಶೇ.30 ರಷ್ಟು ಕೊಡುಗೆ ನೀಡುವದರ ಮೂಲಕ 44254 ಕೋಟಿ ರೂ.ಗಳ ಆದಾಯವನ್ನು ನೀಡುತ್ತಿದೆ. ಕೇವಲ ಶೇ.18.12 ರಷ್ಟು ಪ್ರದೇಶ ಮಾತ್ರ ತೋಟಗಾರಿಕೆ ಪ್ರದೇಶ 308 ಮಿಲಿಯನ್ ಟನ್, 128 ಮಿಲಿಯನ್ ಹೆಕ್ಟೆರ್ ಇದ್ದರೆ, ಅದಕ್ಕಿಂತ ಕಡಿಮೆ ಕ್ಷೇತ್ರ 25.7 ಮಿಲಿಯನ್ ಹೆಕ್ಟೆರ್ ಹೊಂದಿರುವ ತೋಟಗಾರಿಕೆ ಉತ್ಪಾದನೆ 325 ಮಿಲಿಯನ್ ಟನ್ ಇರುವುದು ವಿಶೇಷವಾಗಿದೆ ಎಂದರು.
ಈ ವಿಶ್ವವಿದ್ಯಾಲಯ ರಾಜ್ಯದ 23 ಜಿಲ್ಲೆಗಳಿಗೆ ಒಳಪಟ್ಟಿದ್ದರಿಂದ ಪ್ರತಿ ಜಿಲ್ಲೆಗೆ ಒಬ್ಬರಂತೆ ತೋಟಗಾರಿಕೆ ಕ್ಷೇತ್ರದಲ್ಲಿ ಗಣನೀಯವಾಗಿ ಸಾಧನೆ ಮಾಡಿದ ರೈತರನ್ನು ಕರೆಯಿಸಿ ಸತ್ಕರಿಸುತ್ತಿರುವ ಮೂಲಕ ಕೃಷಿಕರ ಸಾಮಾಜಿಕ ಮಾನ್ಯತೆ ನೀಡಲಾಗುತ್ತಿದೆ. ಇಂತಹ ಮಹತ್ವದ ಕಾರ್ಯ ಸಾಧಿಸುತ್ತಿರುವ ವಿಶ್ವವಿದ್ಯಾಲಯದ ಪ್ರಯೋಜನೆವನ್ನು ರೈತರು, ರೈತ ಮಹಿಳೆಯರು, ಬೆಳೆಗಾರರು, ವಿಸ್ತೀರ್ಣಕಾರರು, ರೈತ ವಿಜ್ಞಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕರೆ ನೀಡಿದರು.
ಸಾವಯವ ಕೃಷಿಕ ಮಹಿಮಾ ಪಟೇಲ ಮಾತನಾಡಿ ಇಂದು ಸಾವಯವ ಕೃಷಿ, ಸಾವಯವ ರಾಜಕಾರಣ ಹಾಗೂ ಸಾವಯವ ಬದುಕು ಪ್ರತಿಯೊಬ್ಬರಿಗೂ ಅವಶ್ಯವಾಗಿದೆ. ನಾನು ಸಾವಯವ ಕೃಷಿಕನಾಗಿ, ಸಾವಯವ ರಾಜಕಾರಣಿಯಾಗಿದ್ದೇನೆ ಎಂದ ಅವರು ಫಲಶ್ರೇಷ್ಠ ರೈತರ ಗುರುತಿಸಿ ಪ್ರಶಸ್ತಿ ಹಾಗೂ ಸನ್ಮಾನ ಮಾಡುವ ಮೂಲಕ ಈ ಸಮಾಜದ ಬದಲಾವಣೆ ತರುವ ಉದ್ದೇಶದಿಂದ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.
ನಾವು ಮುಂದಿನ ದಿನಗಳು ಹೇಗೆ ಬರುತ್ತವೆ ಎಂಬುದನ್ನು ಮನದಲ್ಲಿಟ್ಟುಕೊಂಡು ಮುಂದಿನ ಜನಸಂಖ್ಯೆ, ಕೃಷಿ, ಸರಕಾರ ಅಧಿಕಾರಿಗಳು ಹೇಗಿರುವರೆಂಬ ವಿಷಯವನ್ನು ಗಮನಣದಲ್ಲಿಟ್ಟುಕೊಂಡು ಬದುಕಬೇಕಾಗಿದೆ. 1962ರಲ್ಲಿ ಕೃಷಿ ಕ್ರಾಂತಿ ದಿನವೆಂದು ಘೋಷಿಸಿದ್ದು, ಅಂದು ಹೆಚ್ಚುತ್ತಿರುವ ಜನಸಂಖ್ಯೆಗೆ ಪೂರಕವಾದ ಬೆಳೆಗಳಿಗೆ ಹಾಗೂ ಹೆಚ್ಚು ಇಳುವರಿ ಬರಲೆಂಬ ಉದ್ದೇಶದಿಂದ ರಾಸಾಯನಿಕ ಬಳಸಿದ್ದರ ಪರಿಣಾಮದಿಂದ ಇಚಿದು ಭೂಮಿ ವಿಷಯವಾಗಿ ಪರಿವರ್ತನೆಗೊಂಡಿದೆ. ಇದನ್ನು ಸರಿಪಡಿಸಿಕೊಳ್ಳಬೇಕಾದರೆ ಸಾವಯವ ಹಾಗೂ ನೈಸರ್ಗಿಕ ಪದ್ದತಿ ಬಳಕೆ ಅಗತ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಯು.ಎಚ್.ಎಸ್.ಬಿ ಆ್ಯಪ್ ಬಿಡುಗಡೆಗೊಳಿಸಲಾಯಿತು. ಇದರ ಜೊತೆಗೆ ತೋಟಗಾರಿಕೆ ಬೆಳೆಗಳ ಮಾಹಿತಿಯುಳ್ಳ ವಿವಿಧ ಪ್ರಕಟಣೆಗಳನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಯವ ಕೃಷಿಕ ಶಂಕರಗೌಡ ಪಾಟೀಲ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ತೋವಿವಿಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಡಾ.ಎಂ.ಶಿವಮೂರ್ತಿ, ಎನ್.ಕೆ.ಹೆಗಡೆ, ಡಾ.ರವೀಂದ್ರ ಮುಲಗೆ, ಡಾ.ಟಿ.ಬಿ.ಅಳ್ಳೊಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

10 ಜನ ಫಲಶ್ರೇಷ್ಠರಿಗೆ ಪ್ರಶಸ್ತಿ ಪ್ರದಾನ
ಉತ್ತಮ ಸಾಧನೆ ಮಾಡಿದ 10 ಜನ ಫಲಶ್ರೇಷ್ಠ ರೈತರಾದ ಗದಗ ಜಿಲ್ಲೆಯ ಗರುಡಪ್ಪ ಜಂತ್ಲಿ, ಹಾವೇರಿ ಜಿಲ್ಲೆಯ ಭೀಮಪ್ಪ ಚಿಗರಿ, ಧಾರವಾಡ ಜಿಲ್ಲೆಯ ಶಿವಾನಂದ ಬಸಯ್ಯ ಹಿರೇಮಠ, ಬೀದರ ಜಿಲ್ಲೆಯ ನಾಮದೇವ ಚಂದ್ರಪ್ಪ ಮೇತ್ರೆ, ಕಲಬುರಗಿ ಜಿಲ್ಲೆಯ ಶೈಲಶ್ರೀ ಸಂಗನಗೌಡ, ಯಾದಗಿರಿ ಜಿಲ್ಲೆಯ ದೇವರಾಜ ನಾಯ್ಕ ರಾಠೋಡ, ರಾಯಚೂರು ಜಿಲ್ಲೆಯ ವಿ.ವೆಂಕಟೇಶ ಶ್ರೀನಿವಾಸರಾವ್, ಬಳ್ಳಾರಿ ಜಿಲ್ಲೆಯ ಬಸಪ್ಪ ಮರಿಯಪ್ಪ ಗೋಸ್ಬಾಳ, ವಿಜಯನಗರ ಜಿಲ್ಲೆಯ ಶರಣಬಸವ ಎತ್ತಿನಮನಿ ಹಾಗೂ ಕೊಪ್ಪಳ ಜಿಲ್ಲೆಯ ಮಹಾಚಿತೇಶಗೌಡ ಪಾಟೀಲ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a comment

Your email address will not be published. Required fields are marked *