Dark Light

Blog Post

Namma Bagalkot > News > Business & Technology > World Investors Meet: ಜಾಗತಿಕ ಹೂಡಿಕೆದಾರರ ಸಮಾವೇಶದ ಫಲ ಬಾಗಲಕೋಟೆಗೆ ಬರೋದು ನಿಶ್ಚಿತ: ಸಚಿವ ನಿರಾಣಿ ವಿಶ್ವಾಸ

World Investors Meet: ಜಾಗತಿಕ ಹೂಡಿಕೆದಾರರ ಸಮಾವೇಶದ ಫಲ ಬಾಗಲಕೋಟೆಗೆ ಬರೋದು ನಿಶ್ಚಿತ: ಸಚಿವ ನಿರಾಣಿ ವಿಶ್ವಾಸ

Heavy industries minister Murugesh Nirani expresses confidence in getting investment to Bagalkot
ಬಾಗಲಕೋಟೆ: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆ ಆಗಿರುವ ೧೦ ಲಕ್ಷ ಕೋಟಿ ರೂ.ಗಳ ಪೈಕಿ ಶೇ.75 ನಿಶ್ಚಿತ ಹೂಡಿಕೆ ಆಗಲಿದೆ. ಅದಕ್ಕಾಗಿ ಅವಿರತ ಶ್ರಮ ಹಾಕಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 200 ಒಡಂಬಡಿಕೆಗಳು ಕಳೆದ ತಿಂಗಳು ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಏರ್ಪಟ್ಟಿವೆ. ಈ ಪೈಕಿ ನಿಶ್ಚಿತವಾಗಿ ಶೇ.75ರಷ್ಟು ಹೂಡಿಕೆ ಸದ್ಯದಲ್ಲೇ ಆಗಲಿದೆ. ಅದಕ್ಕಾಗಿ ಸಮಿತಿಯನ್ನೂ ರಚಿಸಲಾಗಿದೆ ಎಂದರು.
ಪ್ರಧಾನಿ ಮೋದಿ, ಬಿಜೆಪಿ ಸರ್ಕಾರ ಇಲ್ಲದೇ ಹೋಗಿದ್ದರೆ ಪೆಟ್ರೋಲ್ ಬೆಲೆ 200ರ ಗಡಿ ದಾಟುತಿತ್ತು. ಮುಂದಿನ ೧೦ ವರ್ಷದೊಳಗೆ ಪೆಟ್ರೋಲ್, ಡೀಸೆಲ್ ಆಮದು ಸಂಪೂರ್ಣ ನಿಲ್ಲಿಸುವ ಗುರಿಯನ್ನು ಸರ್ಕಾರ ಹೊಂದಿದೆ ಅದಕ್ಕಾಗಿಯೇ ಎಥಿನಾಲ್ ಹಾಗೂ ಇಲೆಕ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಗೆ 15 ಸಾವಿರ ಕೋಟಿ:
ಹೂಡಿಕೆದಾರರ ಸಮಾವೇಶದಲ್ಲಿ ಜಿಲ್ಲೆಗೆ 6 ಒಡಂಬಡಿಕೆಗಳಾಗಿವೆ. ಹಲಕುರ್ಕಿಯಲ್ಲಿ ಸರ್ಕಾರದ 600 ಎಕರೆ ಭೂಮಿ ಸೇರಿ ಒಟ್ಟು 1400 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಕೈಗಾರಿಕೆಗಳು ತಲೆ ಎತ್ತಲಿವೆ. ವಿಮಾನ ನಿಲ್ದಾಣಕ್ಕಾಗಿ ಪ್ರಸ್ತಾವನೆಯೂ ಸಿದ್ಧವಾಗಿದ್ದು, ಅಲ್ಲಿನ ರೈತರನ್ನು ಒಪ್ಪಿಸಿಯೇ ಭೂಮಿಯನ್ನು ಪಡೆದುಕೊಳ್ಳಲಾಗಿದೆ. ಉತಾರ ರಹಿತ ಸರ್ಕಾರಿ ಭೂಮಿಯಲ್ಲಿ ಊಳುತ್ತಿರುವ ಪರಿಶಿಷ್ಟ ಸಮುದಾಯದ ರೈತರಿಗೆ ಪರಿಶಿಷ್ಟ ಸಮುದಾಯದ ನಿಗಮಗಳ ಮೂಲಕ ಭೂಮಿ ಕೊಡಿಸುವ ಬಗ್ಗೆಯೂ ಚಿಂತನೆಯಿದ್ದು, ಅಲ್ಲಿಯ ರೈತರು ಒಪ್ಪಬೇಕೆಂದು ಹೇಳಿದರು.
ಗಾಜು ಉತ್ಪಾದನೆ, ಇಲೆಕ್ಟ್ರಿಕ್, ಗ್ರೀನ್‌ಹೈಡ್ರೋಜನ್, ಟೆಕ್ಸಟೈಲ್ ಉದ್ಯಮಗಳು ಸ್ಥಾಪನೆಯಾಗಲಿವೆ. ಭೂಮಿ ಕಳೆದುಕೊಂಡ ರೈತರ ಕುಟುಂಬಸ್ಥರಿಗೆ ಉದ್ಯೋಗ ನೀಡಲಾಗುತ್ತದೆ. ಆಶ್ರಯ ಕಾಲನಿ ಮೂಲಕ ಮನೆಗಳನ್ನೂ ನಿರ್ಮಿಸಿ ಕೊಡಲಾಗುತ್ತದೆ ಎಂದು ವಿವರಿಸಿದರು.
ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿರುವುದು ಹಮ್ಮೆಯ ವಿಚಾರ. ನಾನು ಮಂತ್ರಿಯಾದ ನಂತರ ಹೂಡಿಕೆದಾರರಿಗೆ ಅನುಕೂಲವಾಗುವ ರೀತಿಯಲ್ಲಿ ನಿಯಮಗಳನ್ನು ಜಾರಿಗೆ ತಂದಿದ್ದೇನೆ. ಎಂದರು.
ಯುವಕರು ಸ್ವ ಉದ್ಯೋಗ ಆರಂಭಿಸುವುದಕ್ಕೆ ಉತ್ತೇಜನೆ ನೀಡಲು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಕೊಪ್ಪಳ, ಹೊಸಪೇಟೆ ನಂತರ ಬಾಗಲಕೋಟೆಯಲ್ಲೂ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ಎಂಆರ್‌ಎನ್ ಸಮೂಹ ಏಷ್ಯಾದಲ್ಲೇ ಮೊದಲು
ಪೆಟ್ರೋಲ್, ಡೀಸೆಲ್‌ಗೆ ಪರ್ಯಾಯವಾಗಿರುವ ಎಥಿನಾಲ್ ಉತ್ಪಾದನೆಯಲ್ಲಿ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿ ಎಂಆರ್‌ಎನ್ ಸಮೂಹವಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು. ಪ್ರತಿದಿನ 25 ಲಕ್ಷ ಲೀಟರ್ ಉತ್ಪಾದನೆ ಮಾಡಲಾಗುತ್ತಿದೆ. ಮುಂಬರುವ ಕೆಲವೇ ದಿನಗಳಲ್ಲಿ 51 ಲಕ್ಷ ಲೀಟರ್‌ಗೆ ಹೆಚ್ಚಿಸಿ ಜಗತ್ತಿನಲ್ಲೇ ನಂ.1 ಕಂಪನಿಯಾಗಿ ಎಂಆರ್‌ಎನ್ ಸಮೂಹ ಹೊರಹೊಮ್ಮಲಿದೆ ಎಂದು ಹೇಳಿದರು.
1.10 ಲಕ್ಷ ಟನ್ ಕಬ್ಬು ನುರುಸುವಿಕೆ ಮಾಡಿದರೆ ನಿರಾಣಿ ಸಮೂಹ ದೇಶದಲ್ಲೇ ಮೊದಲ ಕಾರ್ಖಾನೆಯಾಗಿ ಹೊರಹೊಮ್ಮಲಿದೆ. ನಂತರ ಬೇರೆ ಉದ್ಯಮಗಳ ಕಡೆಗೂ ಗಮನಹರಿಸಲಾಗುತ್ತದೆ ಎಂದರು.

ಅವರು ಮುಂದುವರಿದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿ ಮತಕ್ಷೇತ್ರದಿಂದ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಹೇಳಿದರು.
“72 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದ್ದೇನೆ. ಎಂಆರ್‌ಎನ್ ಪ್ರತಿಷ್ಠಾನದ ಮೂಲಕ ಅನೇಕರಿಗೆ ವೈದ್ಯಕೀಯ ಉಪಚಾರ ನೀಡಲಾಗಿದ್ದು, ಬೀಳಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದು, ನನ್ನ ನಿರೀಕ್ಷೆ ದೊಡ್ಡ ಅಂತರವೇ ಇದೆ ಆದರೆ ಕನಿಷ್ಠ ಅಂತರವನ್ನು ಹೇಳಿದ್ದೇನೆ” ಎಂದರು.
ಮತದಾರರ ಪಟ್ಟಿಯಲ್ಲಿ ನಕಲಿ ಹೆಸರುಗಳು ಇದ್ದವು ಎಂಬ ಮಾಜಿ ಶಾಸಕ ಜೆ.ಟಿ.ಪಾಟೀಲ ಅವರ ಆರೋಪಕ್ಕೂ ಪ್ರತಿಕ್ರಿಯಿಸಿದ ಸಚಿವರು, ಜೆ.ಟಿ.ಪಾಟೀಲ ಅವರು ಕ್ಷೇತ್ರದ ಶಾಸಕರಾಗಿ ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದಾರೆ ಎಂಬುದನ್ನು ಹೇಳಲಿ. ಸುಖಾಸುಮ್ಮನೆ ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದರು.
ಬೀಳಗಿ ಕ್ಷೇತ್ರದಲ್ಲಿ 1.25 ಲಕ್ಷ ಎಕರೆ ಭೂಮಿಯನ್ನು ನೀರಾವರಿಗೆ ಒಳಪಡಿಸಲಾಗುತ್ತಿದ್ದು, ಅದಕ್ಕಾಗಿ ಕೆಲಸಗಳು ನಡೆಯುತ್ತಿವೆ. 110 ಕೆವಿಯ 11 ವಿದ್ಯುತ್ ಪ್ರಸರಣ ಕೇಂದ್ರಕ್ಕೆ 370 ಕೋಟಿ ರೂ. ಮಂಜೂರಾಗಿದೆ. ಸಾವಿರಾರು ಕೋಟಿ ರೂ.ಗಳ ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿದೆ ಎಂದರು.

ವರ್ಷಕ್ಕೆ ಎರಡು ಕಾರ್ಖಾನೆ:
ಅತೀ ಹೆಚ್ಚು ಕಬ್ಬು ಬೆಳೆಯುವ ಉತ್ತರ ಪ್ರದೇಶ, ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ಬಿಟ್ಟು ಮುಧೋಳದ ನನ್ನ ಕಾರ್ಖಾನೆ ಮುಂದೆಯೇ ಪ್ರತಿಭಟನೆ ಜೋರಾಗುತ್ತದೆ. ಅದರ ಹಿಂದೆ ಯಾರಿದ್ದಾರೆ ಎಂಬುದರ ಹುಡುಕಾಟದಲ್ಲಿ ನಾನೂ ಇದ್ದೇನೆ ಎಂದು ಹೇಳಿದರು. ಇವರು ಪ್ರತಿಭಟನೆ ಹೆಚ್ಚಿಸಿದಷ್ಟು ನನ್ನ ಕಾರ್ಖಾನೆಗಳ ಸಂಖ್ಯೆ ಬೆಳೆಯುತ್ತಲೇ ಇವೆ. ಇಂಥವರು ಬೇಕು ನನಗೆ. ಈ ವರ್ಷವೂ ಎರಡು ಕಾರ್ಖಾನೆಗಳು ಸೇರ್ಪಡೆಗೊಂಡಿವೆ. ಭಗವಂತ ಎಲ್ಲವನ್ನೂ ನೋಡುತ್ತಾನೆ ಎಂದರು.
ರೈತ ಕುಟುಂಬದಿಂದ ಬಂದ ನಾನು ರೈತರಿಗಾಗಿಯೇ ಕಾರ್ಖಾನೆಗಳನ್ನು ಕಟ್ಟುತ್ತಿದ್ದೇನೆ. ಅವರೊಂದಿಗೆ ಹಠಕ್ಕೆ ಬಿದ್ದು ಸಾಧಿಸುವುದು ಏನೂ ಇಲ್ಲ. ಎಫ್‌ಆರ್‌ಪಿ ನಿಗದಿಯಂತೆ ಬೆಲೆ ಕೊಡಲು ನಾವು ಸಿದ್ಧ. ಈ ಬಾರಿಯ ಹಂಗಾಮಿನಲ್ಲಿ 45 ದಿನಗಳು ವ್ಯರ್ಥವಾಗಿವೆ. ಕಬ್ಬು ಹಸಿಯಾಗಿದ್ದರೆ ತೂಕ ಹೆಚ್ಚಾಗಿ ಬರುತ್ತದೆ. ಪ್ರತಿಭಟನೆಯಿಂದಾಗಿ ಕಾರ್ಖಾನೆಗಳಿಗಿಂತ ರೈತರಿಗೆ ಹೆಚ್ಚು ನಷ್ಟವಾಗಿದೆ. ಇಲ್ಲಿನ ಇಳುವರಿಗೆ ತಕ್ಕದಾದಂತೆ ಬೆಲೆ ಕೊಡುತ್ತಿದ್ದೇವೆ. ರೈತರಿಗೆ ಅನ್ಯಾಯ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ರನ್ನ ಸಕ್ಕರೆ ಕಾರ್ಖಾನೆಯ ಹೆಚ್ಚಿನ ದರ ಹಾಗೂ ಕಾರ್ಖಾನೆ ಅಧ್ಯಕ್ಷ ರಾಮಣ್ಣ ತಳೇವಾಡ ಅವರು ನಮ್ಮದು ತೂಕ ಹೊಡೆಯುವ ಕಾರ್ಖಾನೆಯಲ್ಲ ಎಂಬ ಆರೋಪದ ಕುರಿತಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ನಿರಾಣಿ, ಅವರು ಘೋಷಿಸಿದ ನಂತರ ಅಷ್ಟು ಹಣ ಕೊಟ್ಟಿದ್ದಾರೆಯೇ ಎಂಬುದನ್ನು ರೈತರ ಬಳಿ ಕೇಳಿ ತಿಳಿದುಕೊಳ್ಳಿ. ನಾವು ಒಂದು ಬಾರಿ ರೈತರಿಗೆ ಮಾತು ಕೊಟ್ಟರೆ ಅದಕ್ಕಿಂತ ಕಡಿಮೆ ಕೊಡುವುದಿಲ್ಲ. ತೂಕದಲ್ಲಿ ಏರುಪೇರು ಮಾಡಲು ಸಾಧ್ಯವೇ ಇಲ್ಲ. ಮುಧೋಳದಂಥ ಊರಲ್ಲಿ ಹಾಗೆ ಮಾಡಿದರೆ ಯಾರೂ ಬದುಕುವುದಿಲ್ಲ. ರೈತರಿಗೆ ನಮ್ಮ ಕಾರ್ಖಾನೆ ಬಗ್ಗೆ ವಿಶ್ವಾಸವಿದೆ. ಅವರು ಎಲ್ಲಿ ಬೇಕಾದರೂ ತೂಕ ಪರಿಶೀಲಿಸಿಕೊಳ್ಳಬಹುದು. ಅವರಿಗೆ ತೋರಿಸಿಯೇ ತೂಕ ಮಾಡಲಾಗುತ್ತದೆ ಎಂದರು.

ಮಗನಿಗೆ ರಾಜಕೀಯ ಆಸಕ್ತಿಯಿಲ್ಲ:
ಪುತ್ರ ವಿಜಯ ನಿರಾಣಿ ಎಂಆರ್‌ಎನ್ ಸಮೂಹಕ್ಕೆ ಎಂಡಿಯಾಗಿದ್ದು. ಅಂತಾರಾಷ್ಟ್ರೀಯ ಕಾಲೇಜುಗಳಲ್ಲಿ ಉಪನ್ಯಾಸ ನೀಡಿ ಯುವ ಸಮೂಹವನ್ನು ಪ್ರೇರೇಪಿಸುತ್ತಿದ್ದಾರೆ. ಆತ ನಾಲ್ವಡಿ ಕೃಷ್ಣರಾಜ ಒಡೆಯರ ಅವರನ್ನು ಪ್ರೇರಣೆಯಾಗಿಸಿಕೊಂಡಿದ್ದಾನೆ. ಅವರಂತೆ ಆತ ಹೊಸ ಕಾರ್ಖಾನೆ, ಸಂಸ್ಥೆಗಳನ್ನು ಹುಟ್ಟು ಹಾಕುವ ಕನಸು ಹೊಂದಿದ್ದಾನೆ. ರಾಜಕೀಯದ ಬಗ್ಗೆ ಎಳ್ಳಷ್ಟು ಆಸಕ್ತಿ ಆತನಲ್ಲಿ ಇಲ್ಲ ಎಂದರು. ಎರಡನೇ ಪುತ್ರ ವಿಶಾಲ್ ನಿರಾಣಿ ಕೂಡ ಉದ್ಯಮದಲ್ಲಿ ತೊಡಗಿದ್ದು, ನಾನು, ಹಣಮಂತ ನಿರಾಣಿ ಹೊರತಾಗಿ ಮನೆಯಲ್ಲಿ ಇನ್ನ್ಯಾರೂ ರಾಜಕೀಯ ಪ್ರವೇಶಿಸುವುದಿಲ್ಲ. ಹಾಗೊಂದು ವೇಳೆ ಸಂಗಮೇಶ ನಿರಾಣಿ ಸೇರಿದಂತೆ ಯಾರಿಗೇ ರಾಜಕೀಯ ಆಸಕ್ತಿ ಇದ್ದರೆ ಅವರು ರಾಜಕೀಯಕ್ಕೆ ಬರಲಿ ನಾನು ನಿವೃತ್ತಿ ಘೋಷಿಸಿ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

Leave a comment

Your email address will not be published. Required fields are marked *